ಕನ್ನಡ ನಾಡು | Kannada Naadu

ಕರಾವಳಿ  ಕ್ರೈಸ್ತರಲ್ಲಿ  ʻಮೊಂತಿ ಫೆಸ್ಟ್ʼ ಎನ್ನುವುದು ಎಕತೆ ಹಾಗೂ ಸಂಮೃದ್ಧಿಯ ಸಂಕೇತ

27 Oct, 2024

 
ಉಡುಪಿ: ಕ್ಯಾಥೊಲಿಕ್‌ ಕ್ರೈಸ್ತರಲ್ಲಿ  ಮೊಂತಿ ಫೆಸ್ಟ್‌ ಎನ್ನುವುದು ತೀರಾ ಮಹತ್ವದ ಹಬ್ಬವಾಗಿದೆ. ಕನ್ನಡದಲ್ಲಿ ಈ ಹಬ್ಬಕ್ಕೆ  ತೆನೆ ಹಬ್ಬ ಎಂದು ಕರೆಯುವ ಕರಾವಳಿಯ ಕ್ರೈಸ್ತ ಭಾಂಧವರು, ಈ ಹಬ್ಬವನ್ನು ತುಂಬಾ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಹೆಚ್ಚಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ಕ್ರೈಸ್ತರು ಮೊಂತಿ ಫೆಸ್ಟ್ ಅನ್ನು ಆಚರಿಸುವುದು ಕಂಡು ಬರುತ್ತದೆ. 
      ಈ ಹಬ್ಬದಲ್ಲಿ ಕ್ರೈಸ್ತ  ಧರ್ಮಗುರುಗಳು ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಯನ್ನು ಆಶೀರ್ವದಿಸುತ್ತಾರೆ‌. ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಭತ್ತದ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆ ಎನ್ನುವುದನ್ನು ನಡೆಸುವುದು ಕಾಣಬಹುದು. ಈ ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ವಿಶೇಷ ಪ್ರವಚನ ನೀಡುವುದು ವಾಡಿಕೆ.

         ಇಲ್ಲಿನ ಎಲ್ಲಾ ಚರ್ಚುಗಳಲ್ಲಿ ಹಬ್ಬದ ಬಲಿಪೂಜೆಯನ್ನು ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ನಡೆಯುತ್ತವೆ. ‌ ಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡುತ್ತಾರೆ. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಗುತ್ತದೆ. ಭಕ್ತಿಯಿಂದ ಇಗರ್ಜಿಯಲ್ಲಿ ಪಡೆದ ಭತ್ತದ ಕದಿರನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸುತ್ತಾರೆ. ಅಂದು ಮನೆಗಳಲ್ಲಿಕಡ್ಡಾಯವಾಗಿ ಸಂಪೂರ್ಣ ಸಸ್ಯಹಾರದ ಭಕ್ಷಗಳನ್ನೆ  ತಯಾರಿಸಿ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿಯೇ ಊಟ ಮಾಡುವುದು ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯ.
   ಮೊಂತಿ ಫೆಸ್ಟ್ ಗೂ  ಮುಂಚಿತವಾಗಿ 9 ದಿನ ಮಾತೆ ಮೇರಿಯ ಕೃಪೆಯನ್ನು ಬೇಡಿಕೊಂಡು ವಿಶೇಷ ಪ್ರಾರ್ಥನೆ ಎಲ್ಲಾ ಚರ್ಚ್ ಗಳಲ್ಲಿ ನಡೆಯುತ್ತದೆ. 9 ನೇ ದಿನವನ್ನು ಮೊಂತಿ ಹಬ್ಬವಾಗಿಯೇ ಕರಾವಳಿಯ ಕ್ರೈಸ್ತ ಬಂಧುಗಳು ಆಚರಣೆ ಮಾಡುತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮ ಅವರ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪಾರ್ಪಣೆ ಮಾಡಿದ ನಂತರ ಚರ್ಚ್ಗಳಲ್ಲಿಮೊಂತಿ ಹಬ್ಬಕ್ಕಾಗಿ ವಿಶೇಷವಾದ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತದೆ. ಈ ವೇಳೆ ಗದ್ದೆಗಳಲ್ಲಿ ಬೆಳೆದ ಹೊಸ ತೆನೆಯನ್ನು ಗೌರವ ಪೂರ್ವಕವಾಗಿ ಗುರಿಕಾರರು ಗೌರವ ಪೂರ್ವಕವಾಗಿ ಚರ್ಚಿಗೆ ತಂದು ಧರ್ಮಗುರುಗಳು ಆಶೀರ್ವಚನ ಮಾಡಿ ಪೂಜೆಯ ಬಳಿಕ ಹಬ್ಬದ ಪ್ರಸಾದ ರೂಪದಲ್ಲಿಕುಟುಂಬಗಳಿಗೆ ತೆನೆ ವಿತರಣೆ, ಪುಷ್ಪಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಕಬ್ಬು, ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ.

    ‘ಮೊಂತಿ ಹಬ್ಬ’ದ ಮತ್ತೊಂದು ಪ್ರಮುಖ ಆಚರಣೆಯಲ್ಲಿಹೊಸ ಅಕ್ಕಿ ಊಟ ವಿಶೇಷ ಮನ್ನಣೆ ಪಡೆದುಕೊಂಡಿದೆ.  ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಸೇವಿಸುವುದು ಈ ಹಬ್ಬದ ವಿಶೇಷತೆಗಳಲ್ಲಿಒಂದಾಗಿ ಕಾಣಿಸಿಕೊಳಳುತ್ತದೆ. ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಈ ಹಬ್ಬದ ಸಂದರ್ಭ ತಮ್ಮ ಮನೆಯಲ್ಲಿ ಹಾಜರಿರುವುದು ಕಡ್ಡಾಯ ಎನ್ನುವುದು ಕ್ರೈಸ್ತ ಬಾಂಧವರಲ್ಲಿ ಇರುವ ಅಲಿಖಿತ  ಕಾನೂನು.  


ಇನ್ನೂ ಅನಿವಾರ್ಯ ಕಾರಣಗಳಿಂದಾಗಿ ಹಬ್ಬದಲ್ಲಿಪಾಲ್ಗೊಳ್ಳಲು ಸಾಧ್ಯವಾಗದೆ ಇರುವ ಕುಟುಂಬ ಸದಸ್ಯರಿಗೆ ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ ‘ಪ್ರಥಮ ಭೋಜನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ವಿದೇಶದಲ್ಲಿ, ವಿಶೇಷವಾಗಿ ಕೊಲ್ಲಿರಾಷ್ಟ್ರಗಳಲ್ಲಿನೆಲೆ ನಿಂತ ಕೆಥೋಲಿಕ್ ಕ್ರೈಸ್ತರು ಅಲ್ಲಿನ ಕ್ರೈಸ್ತ ದೇವಾಲಯಗಳಲ್ಲಿ ಕುಟುಂಬದ ಸದಸ್ಯರಂತೆ ಜತೆಗೂಡಿ ಸಂಭ್ರಮದ ತೆನೆಹಬ್ಬ ಆಚರಿಸಿ ಈ ‘ಹೊಸ ಅಕ್ಕಿ’ ಊಟ ಮಾಡುವುದು ನಡೆದುಕೊಂಡು ಬಂದಿದೆ. 

 ವಾಸ್ತವದಲ್ಲಿ ಈ ಹಬ್ಬವು  ಒಂದರ್ಥದಲ್ಲಿಕುಟುಂಬ ಸದಸ್ಯರ ಏಕತೆಯ ಸಂಕೇತವಾಗಿದೆ ಎನ್ನಬಹುದು.  ತೆನೆ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರಿಗೆ ಸಸ್ಯಾಹಾರಿ ಭೋಜನ. ಕ್ರೈಸ್ತರ ಪ್ರತಿ ಮನೆಯಲ್ಲಿಈ ಹಬ್ಬದಂದು ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ತರಕಾರಿಳಿಗೆ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ತರಕಾರಿಗಳನ್ನೆ ಬಳಸಿ ಮಾಡಿದ ಊಟವನ್ನು ಕಡ್ಡಾವಾಗಿ ಬಾಳೆ ಎಲೆಯಲ್ಲಿ ಊಟ ಮಾಡುವುದು ಎಲ್ಲ ಕಡೆಗಳಲ್ಲಿಯೂ ಕಂಡುಬರುವ ಸಾಮಾನ್ಯ ಸಂಗತಿ.. 

Publisher: ಕನ್ನಡ ನಾಡು | Kannada Naadu

Login to Give your comment
Powered by